ಕೆಂಡ್ರೂ, ಜಾನ್ ಕೌಡೆರಿ

 	1917-. ಇಂಗ್ಲೆಂಡಿನ ಜೀವರಸಾಯನ ವಿಜ್ಞಾನಿ. ಆಕ್ಸ್‍ಫರ್ಡ್‍ನಲ್ಲಿ ಮಾರ್ಚ್ 24, 1917ರಲ್ಲಿ ಜನಿಸಿದ. ಈತನ ವಿದ್ಯಾಭ್ಯಾಸ ಆಕ್ಸ್‍ಫರ್ಡ್‍ನಲ್ಲಿಯೂ ಮುಂದೆ ಕೇಂಬ್ರಿಡ್ ವಿಶ್ವವಿದ್ಯಾಲಯದ ಕ್ಲಿಪ್ಟನ್ ಕಾಲೇಜ್ ಮತ್ತು ಟ್ರಿನಿಟಿ ಕಾಲೇಜುಗಳಲ್ಲಿಯೂ ನಡೆಯಿತು. 1939ರಲ್ಲಿ ಬಿ.ಎಸ್.ಸಿ. ಪದವಿ ಪಡೆದ ಮೇಲೆ ಎರಡನೆಯ ಮಹಾಯುದ್ಧದ ಕಾಲದಲ್ಲಿ(1940-45) ವಿಮಾನ ನಿರ್ಮಾಣ ಇಲಾಖೆಯಲ್ಲಿ ಕೆಲಸ ಮಾಡಿದ ಅನಂತರ ತನ್ನ ವಿಶ್ವವಿದ್ಯಾಲಯಕ್ಕೆ ಮರಳಿದ. ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿ ಮಾಡಿದ ನಾಲ್ಕು ವರ್ಷಗಳ ಸಂಶೋಧನೆಯ ಫಲವಾಗಿ 1949ರಲ್ಲಿ ಈತನಿಗೆ ಪಿಎಚ್.ಡಿ. ಪದವಿ ದೊರೆಯಿತು. 

	ಮೆಡಿಕಲ್ ಕೌನ್ಸಿಲ್ ಪ್ರಯೋಗಾಲಯದ ಉಪಾಧ್ಯಕ್ಷ (1953 ರಿಂದ), ರಾಯಲ್ ಇನ್‍ಸ್ಟಿಟ್ಯೂಟಿನ ಡೇವಿ-ಫ್ಯಾರಡೆ ಪ್ರಯೋಗಾಲಯದಲ್ಲಿ ರೀಡರ್ (1954 ರಿಂದ), ರಕ್ಷಣಾ ಇಲಾಖೆಗೆ ವೈಜ್ಞಾನಿಕ ಸಲಹೆಗಾರ(1960-62), ಅಣುಜೀವ ರಸಾಯನಶಾಸ್ತ್ರದ ಪತ್ರಿಕೆಯ ಮುಖ್ಯ ಸಂಪಾದಕ-ಇವೇ ಮೊದಲಾದ ಹುದ್ದೆಗಳಲ್ಲಿ ಈ ವಿಜ್ಞಾನಿ ನಿರಂತರ ಸೇವೆ ಸಲ್ಲಿಸುತ್ತಿದ್ದಾನೆ. ಮ್ಯೋಗ್ಲೋಬಿನ್ ಎಂಬ ಪ್ರೋಟೀನಿನ ಅಣು ಮತ್ತು ವಿನ್ಯಾಸರಚನೆಯನ್ನು ಎಕ್ಸ್‍ಕಿರಣ ಸ್ಫಟಿಕಮಾಪನ ವಿಧಾನದಿಂದ ಸಾಧಿಸಿದ ಸಂಶೋಧನೆಗಾಗಿ ಈತನಿಗೆ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪಾರಿತೋಷಿಕ ದೊರೆಯಿತು (1962). 1965ರಲ್ಲಿ ರಾಯಲ್ ಸೊಸೈಟಿಯ ರಾಯಲ್ ಪದಕವೂ ದೊರೆಯಿತು. ಪ್ರೋಟೀನುಗಳನ್ನು ಕುರಿತ ದಿ ತ್ರೆಡ್ ಆಫ್ ಲೈಫ್ ಎಂಬ ಇವನ ಪುಸ್ತಕ 1966ರಲ್ಲಿ ಪ್ರಕಟವಾಯಿತು.       
                    
       (ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ